

7th October 2024

ಶಿಕಾರಿಪುರ: ಶಾಸಕ ಬಿ.ವೈ ವಿಜಯೇಂದ್ರ ಅವರು ಶಿಕಾರಿಪುರದ ಹಲವು ಮುಖಂಡರೊಡನೆ ಇಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ಶಿಕಾರಿಪುರದಲ್ಲಿ ಹೊಸದಾಗಿ ನಿರ್ಮಾಣವಾಗಿರೋ ಕುಟ್ರಳ್ಳಿ ಟೋಲ್ ನಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಿದರು.
ಈ ವೇಳೆ ಶಾಸಕ ಬಿ.ವೈ ವಿಜಯೇಂದ್ರ ಮಾತನಾಡಿ, ರಾಜ್ಯ ಹೆದ್ದಾರಿ ಸಂಖ್ಯೆ - 57 ಶಿವಮೊಗ್ಗ - ಶಿಕಾರಿಪುರ ಹಾನಗಲ್ ತಡಸ ರಸ್ತೆಯಲ್ಲಿ ಹಾಲಿ ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ತಾಲ್ಲೂಕಿನ ವ್ಯಾಪ್ತಿಯ ಕಲ್ಲಾಪುರ ಹಾಗೂ ಶಿಕಾರಿಪುರ ತಾಲ್ಲೂಕಿನ ಕಣಿವೆಮನೆ ಸಮೀಪ ಕುಟ್ರಳ್ಳಿ ಗ್ರಾಮದಲ್ಲಿ ಸುಂಕ ವಸೂಲಿ ಕೇಂದ್ರವನ್ನು ತೆರೆಯಲಾಗಿದೆ. ಈ ಸುಂಕ ವಸೂಲಿ ಕೇಂದ್ರವು ಒಂದು ಸುಂಕ ವಸೂಲಿ ಕೇಂದ್ರದಿಂದ ಮತ್ತೊಂದು ಸುಂಕ ವಸೂಲಿ ಕೇಂದ್ರಕ್ಕೆ 35 ಕಿ.ಮೀ ಅಂತರದಲ್ಲಿರುತ್ತದೆ. ರಾಜ್ಯ ಹೆದ್ದಾರಿ ಸಂಖ್ಯೆ 57 ಶಿವಮೊಗ್ಗ ಶಿಕಾರಿಪುರ ಹಾನಗಲ್ ತಡಸ ರಸ್ತೆ ಶಿವಮೊಗ್ಗ ದಾವಣಗೆರೆ ಹಾವೇರಿ ಹೀಗೆ ಮೂರು ಜಿಲ್ಲೆಯ ವ್ಯಾಪ್ತಿಗೆ ಬರುತ್ತಿದ್ದು ಮೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ರಸ್ತೆಯಲ್ಲಿ ಶಿವಮೊಗ್ಗ ಜಿಲ್ಲೆ ಒಂದರಲ್ಲೇ ಎರಡು ಸುಂಕ ವಸೂಲಾತಿ ಕೇಂದ್ರ ತೆರೆದಿರುವುದು ಸಮಂಜಸ ವಾಗಿರುವುದಿಲ್ಲಾ ಹಾಗೂ ಒಂದು ಸುಂಕ ವಸೂಲಿ ಕೇಂದ್ರದಿಂದ ಮತ್ತೊಂದು ಸುಂಕ ವಸೂಲಿ ಕೇಂದ್ರಕ್ಕೆ 60 ಕಿ.ಮೀ ಅಂತರವಿರಬೇಕು ಎಂಬ ನಿಯಮವಿದ್ದಾಗಲು ಶಿವಮೊಗ್ಗ ತಾಲ್ಲೂಕಿನ ಕಲ್ಲಾಪುರ ಸುಂಕ ವಸೂಲಿ ಕೇಂದ್ರದಿಂದ ಶಿಕಾರಿಪುರ ತಾಲ್ಲೂಕಿನ ಕುಟ್ರಳ್ಳಿಯಲ್ಲಿ 35 ಕಿ.ಮೀ ಅಂತರದಲ್ಲಿಯೇ ಮತ್ತೊಂದು ಸುಂಕ ವಸೂಲಿ ಕೇಂದ್ರ ಸ್ಥಾಪಿಸಿರುವುದು ಸಮಂಜಸವಾಗಿರುವುದಿಲ್ಲಾ ಹಾಗೂ ನಿಯಮಬಾಹೀರವಾಗಿದೆ ಎಂದು ತಿಳಿಸಿದರು.
ವಿಶೇಷವಾಗಿ ಶಿಕಾರಿಪುರ ತಾಲ್ಲೂಕಿನ ಕುಟ್ನಳ್ಳಿಯಲ್ಲಿ ನಿರ್ಮಿಸಿರುವ ಟೋಲ್ನ ಸುತ್ತಮುತ್ತ ಕಪ್ಪನಹಳ್ಳಿ, ಅಮಟೆಕೊಪ್ಪ, ಜಕ್ಕನಹಳ್ಳಿ, ಸುಣ್ಣದಕೊಪ್ಪ, ಹಿರೆಜಂಬೂರು, ಚಿಕ್ಕಜಂಬೂರು ಗ್ರಾಮಗಳು 5000 ಕ್ಕೂ ಹೆಚ್ಚು ಜನಸಂಖ್ಯೆಯುಳ್ಳ ಗ್ರಾಮಗಳಾಗಿದ್ದು ಗ್ರಾಮ ಪಂಚಾಯತಿ ಕೇಂದ್ರ ಸ್ಥಾನವಾಗಿರುತ್ತದೆ. ಈ ಎಲ್ಲಾ ಗ್ರಾಮ ಪಂಚಾಯತಿಯ ಜನರು ತಮ್ಮ ತಮ್ಮ ಗ್ರಾಮಗಳಿಂದ ಶಿಕಾರಿಪುರ ತಾಲ್ಲೂಕು ಕೇಂದ್ರಕ್ಕೆ ಆಸ್ಪತ್ರೆಗಳ ಕೆಲಸಕ್ಕಾಗಿ, ತಾಲ್ಲೂಕು ಕಛೇರಿ ಕೆಲಸಗಳಿಗಾಗಿ, ಕೋರ್ಟ್ ಕಛೇರಿ ಕೆಲಸಗಳಿಗಾಗಿ ಹಾಗೂ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಪ್ರತಿನಿತ್ಯ ಶಿಕಾರಿಪುರ ತಾಲ್ಲೂಕು ಕೇಂದ್ರಕ್ಕೆ ಬರಬೇಕಾಗಿದೆ. ಈ ಎಲ್ಲಾ ಗ್ರಾಮಗಳ ಜನರು ತಮ್ಮ ಗ್ರಾಮಗಳಿಂದ ಹೊರಟು ಜಿಲ್ಲಾ ಪಂಚಾಯತಿ ಹಾಗೂ ಲೋಕೋಪಯೋಗಿ ಇಲಾಖೆ ಜಿಲ್ಲಾ ಮುಖ್ಯ ರಸ್ತೆಗಳ ಮೂಲಕ ಬಂದು ಶಿಕಾರಿಪುರ ಹಾನಗಲ್ ರಸ್ತೆಯನ್ನು ಕುಟ್ರಳ್ಳಿ ಟೋಲ್ಗೆ ಸುಮಾರು ಒಂದರಿಂದ ಎರಡು ಕಿಮೀ ಅಂತರದಲ್ಲಿ ಇರುವ ಶಿವಮೊಗ್ಗ ಶಿಕಾರಿಪುರ ಹಾನಗಲ್ ರಸ್ತೆಗೆ ಬಂದು ಕೇವಲ ಒಂದರಿಂದ ಎರಡು ಕಿ.ಮೀ ಮಾತ್ರ ಈ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದಾರೆ. ಈ ರೀತಿ ಕೇವಲ ಎರಡು ಕಿ.ಮೀ ಸಂಚಾರ ಮಾಡುವ ನಾಗರೀಕರಿಗೆ ಹಾಗೂ ರೈತರಿಗೆ ಅವರು ಹೊಂದಿರುವ ವಾಹನಗಳಿಗೆ ಹೋಗಿ ಬರುವ ವೆಚ್ಚವಾಗಿ ಸುಮಾರು ಒಂದು ವಾಹನಕ್ಕೆ (ಕಾರಿ) 75 ರೂ ಸುಂಕ ವಸೂಲು ಮಾಡುತ್ತಿರುವುದು ನ್ಯಾಯ ಸಮ್ಮತವಲ್ಲ ಎಂದು ತಿಳಿಸಿದರು.
ಇದಲ್ಲದೇ ಕುಟ್ರಳ್ಳಿಯಲ್ಲಿ ನಿರ್ಮಿಸಿರುವ ಸುಂಕ ವಸೂಲಿ ಕೇಂದ್ರದಿಂದ ಅಂತರದಲ್ಲಿ ಶಿರಾಳಕೊಪ್ಪ ಪುರಸಭೆ ವ್ಯಾಪ್ತಿಯ ಹಾಗೂ ಬಳ್ಳಿಗಾವಿ, ತೊಗರ್ಸಿ, ತಾಳಗುಂದ, ಬಿಳಿಕಿ, ನರಸಾಪುರ, ಅಗ್ರಹಾರಮುಚಡಿ, ತೊಗರ್ಸಿ, ಹರಿಗಿ, ಚಿಕ್ಕಮಾಗಡಿ, ಮಂಚಿಕೊಪ್ಪ, ಕೊರಟಿಗೆರೆ, ಮಳವಳ್ಳಿ ಗ್ರಾಮ ಪಂಚಾಯತಿ ಕೇಂದ್ರಗಳಿದ್ದು ಈ ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರತಿ ಗ್ರಾಮದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನರು ವಾಸಮಾಡುತ್ತಿದ್ದಾರೆ. ಈ ಎಲ್ಲಾ ಗ್ರಾಮಗಳ ನಾಗರೀಕರು ಆಸ್ಪತ್ರೆ, ತಾಲ್ಲೂಕ ಕಛೇರಿ, ಕೋರ್ಟ್, ವಿದ್ಯಾಬ್ಯಾಸಕ್ಕಾಗಿ ಶಿಕಾರಿಪುರ ತಾಲ್ಲೂಕು ಕೇಂದ್ರಕ್ಕೆ ಪ್ರತಿದಿನ ಬರಬೇಕಾಗಿರುತ್ತದೆ. ಈ ಎಲ್ಲಾ ನಾಗರೀಕರಿಂದ ಅವರು ಹೊಂದಿರುವ ವಾಹನಗಳಿಗೆ (ಕಾರು) 75 ರೂ ಸುಂಕ ವಸೂಲಿ ಮಾಡುತ್ತಿರುವುದು ಸಮಂಜಸವಾಗಿರುವುದಿಲ್ಲ. ಅದೇ ರೀತಿ ಶಿಕಾರಿಪುರ ಭಾಗದಿಂದ ಕುಟ್ರಳ್ಳಿ ಮೂಲಕ ಕಪ್ಪನಹಳ್ಳಿ, ಜಕ್ಕನಹಳ್ಳಿ, ಅಮಟೆಕೊಪ್ಪ, ಹಿರೆಜಂಬೂರು. ಗ್ರಾಮ ಪಂಚಾಯತಿ ಕೇಂದ್ರಗಳ ಹಳ್ಳಿಗಳಿಗೆ ಹೋಗುವ ನಾಗರೀಕರು ಕೇವಲ 5 ರಿಂದ 6 ಕಿ.ಮೀ ಮಾತ್ರ ಟೋಲ್ ರಸ್ತೆ ಬಳಕೆ ಮಾಡುತ್ತಾರೆ. ಈ ಗ್ರಾಮಗಳ ನಾಗರೀಕರು ತಾವು ಹೊಂದಿರುವ ವಾಹನಗಳಿಗೆ ಹೋಗಿ ಬರುವಾಗ 75 ರೂ ಸುಂಕ ಪಾವತಿ ಮಾಡುವುದು ತುಂಬಾ ಹೊರೆಯಾಗುತ್ತಿದೆ. ಆದ್ದರಿಂದ ಶಿಕಾರಿಪುರ ತಾಲ್ಲೂಕು ಕುಟ್ರಳ್ಳಿ ಯಲ್ಲಿ ನಿರ್ಮಿಸಿರುವ ಸುಂಕ ವಸೂಲಾತಿ ಕೇಂದ್ರವನ್ನು ತೆರವುಗೊಳಿಸುವಂತೆ ಮನವಿ ಮಾಡಿದರು. ಈ ವೇಳೆ ಶಿಕಾರಿಪುರದ ಹಲವು ಮುಖಂಡ ಇದ್ದರು.

ಪತ್ರಕರ್ತರಿಗೆ ಅಗೌರವ ತೋರಿದ ಮಾಜಿ ಶಾಸಕ ಡಿ.ಜಿ. ಪಾಟೀಲ ಹೇಳಿಕೆ ಖಂಡಿಸಿ ಬಹಿರಂಗ ಕ್ಷಮೆಗೆ ಆಗ್ರಹ

ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶಿವಶರಣಪ್ಪಗೌಡ್ರ ಪಾಟೀಲ್ ನಿಧನ.